ಎಕ್ಕದ ಗಿಡ ಎಲ್ಲರಿಗೂ ಅತ್ಯಂತ ಪರಿಚಿತ ಹಾಗೂ ಹಿಂದು ಧರ್ಮದಲ್ಲಿ ಪೂಜಾರ್ಹವಾದ ಗಿಡ. ಇದರಲ್ಲಿ ಕೆಂಪು ಹಾಗೂ ಬಿಳಿ ಬಣ್ಣದ ಹೂಗಳ ಎರಡು ಪ್ರಭೇದ ಗಳಿವೆ. ಇದರಲ್ಲಿ ಬಿಳಿ ಬಣ್ಣದ ಹೂಗಳ ಎಕ್ಕೆ ಗಿಡ ಹೆಚ್ಚಾಗಿ ಔಷಧೀಯ ವಾಗಿ ಬಳಸಲಾಗುತ್ತದೆ. ಎಕ್ಕದ ಹೂವುಗಳಿಂದ ಹಾರಗಳನ್ನು ತಯಾರಿಸಿ ಪೂಜೆಗೆ ಉಪಯೋಗಿಸುತ್ತಾರೆ.
ಹಿಂದೆ ರೈತಾಪಿ ಜನರು ಹೊಲಗಳಲ್ಲಿ ದುಡಿಯು ವಾಗ ಇದರ ಎಲೆಯಿಂದ ಎಕ್ಕಿ ಬತ್ತಿ (ಎಲೆಯನ್ನು ಚಿಲುಮೆಯ ಹಾಗೆ ಸುತ್ತಿ ತಂಬಾಕು ತುಂಬಿದ ಬೀಡಿ) ತಯಾರಿಸಿ ಸೇದುತ್ತಿದ್ದರು. ಅಸಂಖ್ಯಾತ ಬೀಜಗಳನ್ನು ಹೊಂದಿರುವ ಎಕ್ಕಿ ಗಿಡದ ಕಾಯಿ ಒಣಗಿದಾಗ ಬೀಜಗಳು ಗಾಳಿಯಲ್ಲಿ ಪ್ರಸಾರ ವಾಗುತ್ತವೆ. ಎಕ್ಕೆ ಗಿಡ ಸಂಪೂರ್ಣ ಹಾಲು ತುಂಬಿರುವ ಕಾರಣ ಕ್ಷೀರ ಪರ್ಣ ಎಂದು ಕರೆಯಲಾಗಿದೆ.
ಎಕ್ಕೆ ಗಿಡದ ಬೇರು,ಕಾಂಡ, ಎಲೆ ಹೂವುಗಳನ್ನು ನುರಿತ ನಾಟಿ ವೈದ್ಯರು, ಪಾರಂಪರಿಕ ಚಿಕಿತ್ಸಕರು ಹಲವಾರು ಕಾಯಿಲೆಗಳಲ್ಲಿ ಶುದ್ಧೀಕರಿಸಿ ಬಳಸುತ್ತಾರೆ.
ಎಕ್ಕೆ ಗಿಡದ ಕೆಲವು ಸರಳ ಚಿಕಿತ್ಸೆಗಳು :
ಹಲ್ಲು ನೋವಿಗೆ ಅರಳೆಯನ್ನು ಎಕ್ಕೆ ಹಾಲಿನಲ್ಲಿ ಅದ್ದಿ ಇಟ್ಟುಕೊಳ್ಳಬೇಕು. ಹಾಗೂ ಉಗುಳನ್ನು ಉಗುಳುತ್ತಿರ ಬೇಕು.
ಚೇಳು ಕಚ್ಚಿದಾಗ ಎಕ್ಕದ ಹಾಲಿನಲ್ಲಿ ಇಂಗು ತೇಯ್ದು ಹಚ್ಚಬೇಕು.
ಇಸುಬು ರೋಗಕ್ಕೆ ಎಕ್ಕದ ಹಾಲು, ಪಚ್ಚ ಕರ್ಪುರ, ಹಸುವಿನ ಬೆಣ್ಣಿಯಲ್ಲಿ ಚೆನ್ನಾಗಿ ಬೆರೆಸಿ ಪ್ರತಿದಿನ ಹಚ್ಚಬೇಕು.
ಮುಳ್ಳು ಚುಚ್ಚಿ ನೋವಾದಾಗ ಹಾಗೂ ಮುಳ್ಳಿನ ನಂಜು ನಿವಾರಿಸಲು ಎಕ್ಕದ ಹಾಲು ಹಚ್ಚಬಹುದು.
ಹಿಮ್ಮಡಿ ನೋವಿಗೆ ಒಂದು ಇಟ್ಟಿಗೆ ಯನ್ನು ಚೆನ್ನಾಗಿ ಕಾಯಿಸಬೇಕು. ಕಾಯ್ದ ಇಟ್ಟಿಗೆಯ ಮೇಲೆ ಎರಡು ಎಕ್ಕೆ ಗಿಡದ ಎಲೆಗಳನ್ನು ಹಾಕಿ ನೋವಾದ ಹಿಮ್ಮಡಿ ಇಟ್ಟು ಶಾಖ ಕೊಡಬೇಕು.
ಇದನ್ನೂ ಓದಿ: ಉಪ್ಪಿನ ಉಪಯೋಗಗಳು
ಕಿವಿ ನೋವಿಗೆ ಹಣ್ಣಾಗಿ ಕೆಳಗಡೆ ಉದುರಿದ ಹಳದಿ ಬಣ್ಣದ ಎರಡು ಎಕ್ಕದ ಎಲೆಗಳನ್ನು ತೊಳೆದು ಜಜ್ಜಿ ಎಳ್ಳೆಣ್ಣೆ ಯಲ್ಲಿ ಮೂರ್ನಾಲ್ಕು ಬೆಳ್ಳುಳ್ಳಿ ಎಸಳು ಹಾಕಿ ಕಾಯಿಸಿ ಶೋಧಿಸಿ ಕೊಂಡು ತಂಪಾದ ನಂತರ ಕಿವಿಯಲ್ಲಿ ಮೂರ್ನಾಲ್ಕು ಹನಿ ಹಾಕಬೇಕು.
ಸಂಪೂರ್ಣ ಎಕ್ಕದ ಗಿಡ ಹಾಗೂ ಹಾಲು ವಿಷಪೂರಿತವಾಗಿದೆ. ಕಣ್ಣಿಗೆ ಹಾಲು ತಾಗದ ಹಾಗೆ ಎಚ್ಚರಿಕೆ ವಹಿಸಬೇಕು.
ಆಂತರಿಕ ಸೇವನೆ ಸಲ್ಲದು.