ಋತುಬಂಧ (Menopause) ಎಂದರೇನು?
“ಋತುಬಂಧವು ಮಹಿಳೆಯರ ಋತುಚಕ್ರದ ಅಂತ್ಯವನ್ನು ಸೂಚಿಸುವ ನೈಸರ್ಗಿಕ ಜೈವಿಕ ಪ್ರಕ್ರಿಯೆಯಾಗಿದೆ. ಮಹಿಳೆಯರಿಗೆ ಒಂದು ವರ್ಷದವರೆಗೆ ಋತುಸ್ರಾವವಾಗದಿದ್ದರೆ ಋತುಬಂಧ ಎಂದು ಕರೆಯಲಾಗುತ್ತದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ 40ರಿಂದ 50 ವಯಸ್ಸಿನಲ್ಲಿ ಋತುಬಂಧ ಸಂಭವಿಸುತ್ತದೆ. ಇದರ ಸರಾಸರಿ ವಯಸ್ಸು 51 ಆಗಿದೆ. ಋತುಬಂಧವನ್ನು ಗುರುತಿಸಲು ಹಲವಾರು ಸಂಕೇತಗಳಿವೆ.
ಋತುಬಂಧ (Menopause) ಆರೋಗ್ಯ ಸಮಸ್ಯೆಯೇ?
ಋತುಬಂಧವು ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಲ್ಲ. ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಪ್ರತಿ ಮಹಿಳೆಯು ತನ್ನ ಜೀವಿತಾವಧಿಯಲ್ಲಿ ಇದನ್ನು ಎದುರಿಸುತ್ತಾಳೆ. ಇದು ಆರೋಗ್ಯ ಸ್ಥಿತಿಗೆ ಸಂಬಂಧಿಸಿದ್ದರೂ, ಪರಿವರ್ತನೆಯ ಹಂತದಲ್ಲಿ ತೂಕ ಹೆಚ್ಚಾಗುವಂತಹ ಅಹಿತಕರ ಲಕ್ಷಣಗಳು ಕಂಡುಬರುತ್ತವೆ.
ಋತುಬಂಧಕ್ಕೆ (Menopause) ಕಾರಣವೇನು?
ಮಹಿಳೆಯು ಪಲವತ್ತಾಗಿರುತ್ತಾಳೆ ಮತ್ತು ಮುಟ್ಟಿನ ಹಂತದಲ್ಲಿ ಗರ್ಭಧರಿಸುವ ಸಾಧ್ಯತೆಯಿರುತ್ತದೆ. ಅವರ ಅಂಡಾಶಯಗಳು ನಿಯಮಿತವಾಗಿ ಮೊಟ್ಟೆಗಳನ್ನು ಬಿಡುಗಡೆ ಮಾಡುತ್ತವೆ. ಅವು ಆರೋಗ್ಯಕರವಾಗಿರುತ್ತವೆ ಮತ್ತು ಗರ್ಭಧರಿಸಲು ಅಗತ್ಯವಿರುವ ಸಾಕಷ್ಟು ಹಾರ್ಮೋನುಗಳನ್ನು ಉತ್ಪಾದಿಸುತ್ತವೆ.
ಋತುಬಂಧದ ಸಮಯದಲ್ಲಿ ಹಾರ್ಮೋನುಗಳ ಮಟ್ಟವು ಕಡಿಮೆಯಾಗುತ್ತದೆ ಮತ್ತು ಅಂಡಾಶಯವು ಗರ್ಭಿಣಿಯಾಗಲು ಅಗತ್ಯವಾದ ಮೊಟ್ಟೆಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸುತ್ತದೆ. ಕೆಲವು ಮಹಿಳೆಯರು ಈ ಹಂತವನ್ನು ಬೇಗನೆ ತಲುಪಿದರೆ, ಕೆಲವರು ತಡವಾಗಿ ತಲುಪುತ್ತಾರೆ.
ಮೂಡ್ ಬದಲಾವಣೆ:
ಋತುಬಂಧದ ಸಮಯದಲ್ಲಿ ಹಾರ್ಮೋನ್ ಮಟ್ಟದಲ್ಲಿನ ಬದಲಾವಣೆಯು ಮನಸ್ಥಿತಿ ಬದಲಾವಣೆಗೆ ಕಾರಣವಾಗಬಹುದು. ಅಲ್ಲದೆ, ಕೆಲವು ಮಹಿಳೆಯರಿಗೆ ಆತಂಕ, ಖಿನ್ನತೆ ಅಥವಾ ಕಿರಿಕಿರಿಗೆ ಕಾರಣವಾಗಬಹುದು. ಇಂತಹ ಸನ್ನವೇಶದಲ್ಲಿ ಚಿಂತೆ ಮಾಡುವ ಅಗತ್ಯವಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಅಥವಾ 2 ವಾರಗಳಿಗಿಂತ ಹೆಚ್ಚು ಬದಲಾವಣೆಯಾದರೆ ವೃತ್ತಿಪರರ ಸಹಾಯವನ್ನು ಪಡೆಯುವುದು ಉತ್ತಮ.
ಏಕಾಗ್ರತೆಯ ಕೊರತೆ:
ಪೆರಿಮೆನೋಪಾಸಲ್ ಹಂತದಲ್ಲಿ ಸುಮಾರು ಮೂರನೇ ಎರಡರಷ್ಟು ಮಹಿಳೆಯರು ಮರೆವಿನ ಅನುಭವವನ್ನು ಅನುಭವಿಸುತ್ತಾರೆ ಅಥವಾ ಏಕಾಗ್ರತೆ ಹೊಂದಲು ಕಷ್ಟಪಡುತ್ತಾರೆ.
ಕೆಲವೊಮ್ಮೆ ಮರೆವು ಒತ್ತಡಕ್ಕೂ ಸಂಬಂಧಿಸಿರಬಹುದು. ಮರೆವು ಮತ್ತು ಏಕಾಗ್ರತೆಯ ಕೊರತೆಯ ಕಾರಣವನ್ನು ಗುರುತಿಸಲು ವೈದ್ಯರ ಸಹಾಯವನ್ನು ತೆಗೆದುಕೊಳ್ಳುವುದು ಉತ್ತಮ. ನಿದ್ರೆಯ ಚಕ್ರದ ಬಗ್ಗೆ ಕೂಡ ಕಾಳಜಿ ವಹಿಸಬೇಕು.
ತಲೆನೋವು:
ಋತುಬಂಧ ಸಮಯದಲ್ಲಿ ತಲೆನೋವು ಸಮಸ್ಯೆ ಎದುರಾಗುತ್ತದೆ. ಆದರೆ, ಬೇರೆ ಬೇರೆ ಮಹಿಳೆಯರಿಗೆ ಬೇರೆ ಬೇರೆ ಅನುಭವವಾಗುತ್ತದೆ. ಜೀವನದುದ್ದಕ್ಕೂ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯರು ಋತುಬಂಧದ ಸಮಯದಲ್ಲಿ ತೀವ್ರ ತಲೆನೋವು ಸಮಸ್ಯೆ ಎದುರಿಸುತ್ತಾರೆ. ತಮ್ಮ ಮಾಸಿಕ ಋತುಚಕ್ರದ ಸಮಯದಲ್ಲಿ ತಲೆನೋವು ಅನುಭವಿಸುವ ಮಹಿಳೆಯರ ಮೇಲೆ ತಲೆನೋವಿನ ಸಮಸ್ಯೆಯ ಪರಿಣಾಮ ಇನ್ನೂ ಕೆಟ್ಟದಾಗಿರಬಹುದು.
ಋತುಬಂಧದ (Menopause) ಇತರ ಸಂಕೇತಗಳು:
- ನಿದ್ರಾಹೀನತೆ.
- ತೂಕ ಹೆಚ್ಚಳ.
- ಚರ್ಮ, ಬಾಯಿ ಮತ್ತು ಕಣ್ಣು ಒಣಗುವಿಕೆ.
- ಕೂದಲು ತೆಳುವಾಗುವಿಕೆ – ಅಥವಾ ಉದುರುವಿಕೆ.
- ಕೀಲು ನೋವು.
- ಹೃದಯ ಬಡಿತ ಹೆಚ್ಚಳ.
ಋತುಬಂಧದ (Menopause) ಲಕ್ಷಣಗಳನ್ನು ಕಡಿಮೆ ಮಾಡಲು ಉತ್ತಮ ಆಹಾರಗಳು:
- ಡೈರಿ ಉತ್ಪನ್ನಗಳು : ಹಾಲು, ಮೊಸರು ಮತ್ತು ಗಿಣ್ಣು.
- ಆರೋಗ್ಯಕರ ಕೊಬ್ಬುಗಳು : ಒಮೆಗಾ-3 ಕೊಬ್ಬಿನಾಮ್ಲಗಳು ಮೀನು, ಅಗಸೆ, ಸೆಣಬಿನ ಬೀಜಗಳನ್ನು ಒಳಗೊಂಡಿರುತ್ತವೆ.
- ಧಾನ್ಯಗಳು : ಕಂದು ಅಕ್ಕಿ, ಗೋಧಿ ಬ್ರೆಡ್, ಬಾರ್ಲಿ, ಕ್ವಿನೋವಾ, ಮತ್ತು ರಾಗಿ. ನೈಸರ್ಗಿಕವಾಗಿ ಫೈಟೊಸ್ಕೋಜೆನ್ಗಳನ್ನು ಒಳಗೊಂಡಿರುವ ಸೋಯಾಬೀನ್, ಕಡಲೆಕಾಯಿ, ಬಾರ್ಲಿ, ದ್ರಾಕ್ಷಿ, ಗ್ರೀನ್ ಟೀ ಮತ್ತು ಬ್ಲಾಕ್ ಟೀ ಸೇವನೆ ಉತ್ತಮ.
ಫೈಬರ್ ಭರಿತ ಆಹಾರ ಹೆಚ್ಚಿರಲಿ:
ಉತ್ತಮ ಜೀರ್ಣಕ್ರಿಯೆಗೆ ಫೈಬರ್ ಅತ್ಯಗತ್ಯ. ಅದರಲ್ಲೂ ಮಲಬದ್ಧತೆ ಸಮಸ್ಯೆ ಕಾಡುತ್ತಿದ್ದರೆ, ನಾರಿನಾಂಶ ಹೆಚ್ಚಿರುವ ಆಹಾರ ಸೇವಿಸಿ. ಮಲಬದ್ಧತೆ ಸಮಸ್ಯೆಯೇ ಮುಂದೆ, ಬೊಜ್ಜು, ಕೊಲೆಸ್ಟ್ರಾಲ್ ಬೆಳವಣಿಗೆಗೆ ಕಾರಣವಾಗುವುದು. ಮುಟ್ಟು ನಿಂತ ಮೇಲೆ ನಾವು ನಮ್ಮ ಆಹಾರದಲ್ಲಿ ಕನಿಷ್ಠ 15 ರಿಂದ 20 ಪ್ರತಿಶತ ಫೈಬರ್ ಉತ್ಪನ್ನಗಳನ್ನು ಸೇವಿಸಬೇಕು. ಅದಕ್ಕಾಗಿ ಹೆಚ್ಚು ಹೆಚ್ಚು ಸಲಾಡ್ ಸೇವಿಸುವುದು ಉತ್ತಮ. ಇದು ನಿಮ್ಮನ್ನು ಸಮಸ್ಯೆಗಳಿಂದ ಕಾಪಾಡುತ್ತದೆ.
ಅತಿಯಾದ ಕಾಫಿ-ಟೀ ತಪ್ಪಿಸಿ:
ಮುಟ್ಟು ನಿಂತ ಮೇಲೆ ದಿನಕ್ಕೆ ಒಂದು ಅಥವಾ ಎರಡು ಕಪ್ ಚಹಾ ಮತ್ತು ಕಾಫಿಗೆ ಮಿತಿಗೊಳಿಸಿದರೆ ತೊಂದರೆ ಇಲ್ಲ, ಆದರೆ ಮೊದಲಿನಂತೆ ಆಗೊಮ್ಮೆ ಈಗೊಮ್ಮೆ ಕಾಫಿ ಮತ್ತು ಟೀ ಕುಡಿಯುತ್ತಿದ್ದರೆ, ಈ ಅಭ್ಯಾಸಕ್ಕೆ ಬಾಯ್ ಹೇಳುವುದು ಉತ್ತಮ. ಈಗಲೂ ಅದನ್ನು ಮುಂದುವರಿಸಿದರೆ, ಸಮಸ್ಯೆ ಕಟ್ಟಿಟ್ಟ ಬುತ್ತಿ. ಇಲ್ಲಿ, ಒಂದು ವಿಷಯವನ್ನು ಹೆಚ್ಚು ಗಮನದಲ್ಲಿಟ್ಟುಕೊಳ್ಳಿ. ಸಮಯಕ್ಕೆ ಸರಿಯಾಗಿ ತಿನ್ನಬೇಕು, ಇಲ್ಲವಾದಲ್ಲಿ ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುವುದು.
ಸಾಕಷ್ಟು ನೀರು ಕುಡಿಯಿರಿ:
ಸಾಕಷ್ಟು ನೀರು ಕುಡಿಯುವುದು ಎಂದಿಗೂ ಪ್ರಯೋಜನಕಾರಿಯಾಗಿದೆ, ಆದರೆ ಋತುಬಂಧದ ನಂತರ, ದೇಹದಲ್ಲಿ ನೀರಿನ ಪ್ರಮಾಣವು ಯಾವುದೇ ಕಾರಣಕ್ಕೂ ಕಡಿಮೆಯಾಗಲು ಬಿಡಬಾರದು. ಆದ್ದರಿಂದ ಆದಷ್ಟು ಹೆಚ್ಚೆಚ್ಚು ಪ್ರಮಾಣದಲ್ಲಿ ನೀರನ್ನು ಕುಡಿಯಲು ಪ್ರಾರಂಭಿಸಿ, ಏಕೆಂದರೆ, ನೀರು ನಿಮ್ಮನ್ನು ಹೈಡ್ರೆಟ್ ಆಗಿ ಇಡಲು ಸಹಾಯ ಮಾಡುತ್ತದೆ.
ಧೂಮಪಾನ ಬೇಡ:
ಧೂಮಪಾನವು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಋತುಬಂಧದ ನಂತರ ಇದು ಮತ್ತಷ್ಟು ಸಮಸ್ಯೆಗೆ ಕಾರಣವಾಗಬಹುದು. ಈ ಹಿಂದೆ ಧೂಮಪಾನ, ತಂಬಾಕು ಸೇವನೆ ಮಾಡುತ್ತಿದ್ದರೆ, ಮುಟ್ಟು ನಿಂತ ಮೇಲೆ ಅದನ್ನು ಬಿಡುವುದು ಉತ್ತಮ. ಇಲ್ಲವಾದಲ್ಲಿ ನಾನಾ ಸಮಸ್ಯೆಗಳಿಗೆ ಕಾರಣವಾಗಬಹುದು.
ಓಡಬೇಡಿ ಆದರೆ ನಿಯಮಿತವಾಗಿ ನಡೆಯಿರಿ:
ಈ ವಯಸ್ಸಿನಲ್ಲಿ ರನ್ನಿಂಗ್ ಅಗತ್ಯವಿಲ್ಲ, ಹಾಗಂತ ಈಗಾಗಲೇ ನಿಯಮಿತವಾಗಿ ಓಡುತ್ತಿದ್ದರೆ ಅದನ್ನು ನಿಲ್ಲಿಸುವ ಅಗತ್ಯವಿಲ್ಲ. ಒಂದು ವೇಳೆ, ಓಟವು ನಿಮ್ಮನ್ನು ಆಯಾಸಗೊಳಿಸಿದರೆ, ದೇಹ ಮತ್ತು ಮನಸ್ಸು ದಣಿದಿದ್ದರೆ, ಓಡುವುದನ್ನು ದೂರವಿಡಿ. ಆದರೆ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ನಿಲ್ಲಿಸಬೇಡಿ. ಮುಟ್ಟು ನಿಂತ ನಂತರವೂ, ನೀವು ಮೊದಲಿನಂತೆಯೇ ನಿಮ್ಮ ನಿಯಮಿತ ಜೀವನವನ್ನು ನಡೆಸಬಹುದು. ಆದರೆ ಹಿಂದೆ ನಡೆಯದಿದ್ದರೆ, ಈಗ ಖಂಡಿತವಾಗಿಯೂ ನಡೆಯಲೇಬೇಕು. ವಯಸ್ಸಾದ ಮೇಲೆ ಸಣ್ಣ ವ್ಯಾಯಾಮ ಬೇಕೇಬೇಕು.
ಋತುಬಂಧದ (Menopause) ಸಮಯದಲ್ಲಿ ಏನಾಗುತ್ತದೆ?
- ಇಸ್ರೋಜೆನ್ ಹಾರ್ಮೋನ್ ಕಡಿಮೆಯಾಗಲು ಆರಂಭವಾಗುತ್ತದೆ.
- ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
- ಕೊಲೆಸ್ಟ್ರಾಲ್ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ.
- ಕಾರ್ಬೋಹೈಡ್ರೆಟ್ ಜೀರ್ಣಕ್ರಿಯೆಯ ಮೇಲೆಯೂ ಪರಿಣಾಮ ಬೀರುತ್ತದೆ.
- ನಿದ್ರೆ ಸಮಸ್ಯೆ ಎದುರಾಗುತ್ತದೆ.
ಈ ಆಹಾರಗಳ ಸೇವನೆ ಬೇಡ:
- ಆಕ್ಕೋಹಾಲ್.
- ಕೃತಕ ಸಕ್ಕರೆ, ಸಂಸ್ಕರಿಸಿದ ಕಾರ್ಬೋಹೈಡ್ರೆಟ್ಗಳು.
- ಕೆಫೀನ್.
- ಮಸಾಲೆಯುಕ್ತ ಆಹಾರಗಳು.
- ಹೆಚ್ಚು ಉಪ್ಪುಯುಕ್ತ ಆಹಾರ ಪದಾರ್ಥಗಳು.
ಆಹಾರಕ್ರಮದಲ್ಲಿನ ಈ ಸರಳ ಬದಲಾವಣೆಗಳು ನಿಮ್ಮ ಜೀವನದಲ್ಲಿನ ಪ್ರಮುಖ ಪರಿವರ್ತನೆ ಹಂತವನ್ನು ಸುಲಭಗೊಳಿಸಬಹುದು.
Related Stories:
ಬ್ರೈನ್ ಸ್ಟ್ರೋಕ್ ಎಂದರೇನು? ಬ್ರೈನ್ ಸ್ಟ್ರೋಕ್ ರಕ್ಷಣೆಗೆ ನೈಸರ್ಗಿಕ ವಿಧಾನಗಳು
ಮಕ್ಕಳ ಜೀವನದ ಮಹತ್ವ ಮತ್ತು ಬೆಳವಣಿಗೆ – ಎಲ್ಲಾ ತಂದೆ ತಾಯಿ ಮತ್ತು ಪೋಷಕರಿಗೆ ಉಪಯುಕ್ತ ಮಾಹಿತಿ